ಕಾರಾಗೃಹ ದುಡಿಮೆ

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

ಕಾರಾಗೃಹದಲ್ಲಿರುವ ಕೈದಿಗಳ ಶ್ರಮವನ್ನು ಉತ್ಪಾದನೆಗಾಗಿ ಬಳಸಿಕೊಳ್ಳುವ ಪದ್ಧತಿ ಈಗ ಸಾಮಾನ್ಯವಾಗಿ ಪ್ರತಿಯೊಂದು ದೇಶದಲ್ಲೂ ಜಾರಿಯಲ್ಲಿದೆ. ರಾಷ್ಟ್ರದಲ್ಲಿರುವ, ದುಡಿಯಬಹುದಾದ, ಯಾರ ಶ್ರಮವೂ ವ್ಯರ್ಥವಾಗಬಾರದು ಎಂಬುದರ ಜೊತೆಗೆ ಕೈದಿಗಾಗಿ ಸರ್ಕಾರ ಮಾಡುವ ಖರ್ಚಿನಲ್ಲಿ ಉಳಿತಾಯ ಮಾಡುವುದೂ ಶಿಕ್ಷೆ ಪೂರೈಸಿದ ಮೇಲೆ ಕೈದಿ ಬಿಡುಗಡೆ ಹೊಂದಿದಾಗ ಸಮಾಜದಲ್ಲಿ ಅವನು ಯೋಗ್ಯ ಪ್ರಜೆಯಾಗಿ ಪುನಃಸ್ಥಾಪನಗೊಳ್ಳುವಂತೆ ಮಾಡುವುದೂ ಇದರ ಉದ್ದೇಶಗಳು. ಸುಯೋಜಿತವಾದ ದುಡಿಮೆಯಿಂದ ಕೈದಿಯ ಮನಸ್ಸಿನ ಮೇಲೆ ಒಳ್ಳೆಯ ಪರಿಣಾಮವುಂಟಾಗುತ್ತದೆ.

ಯುದ್ಧಕೈದಿಗಳನ್ನು ಮತ್ತು ಅಪರಾಧಿಗಳನ್ನು ಊಳಿಗದವರನ್ನಾಗಿ ಮಾಡಿಕೊಂಡು ಅದರಿಂದ ಕಡ್ಡಾಯ ಸೇವೆ ಮಾಡಿಸಿಕೊಳ್ಳುವ ಪದ್ಧತಿ ಕ್ರಿ.ಶ. 12ನೆಯ ಶತಮಾನದವರೆಗೂ ಐರೋಪ್ಯ ರಾಷ್ಟ್ರಗಳಲ್ಲಿ ಜಾರಿಯಲ್ಲಿತ್ತು. ಅಲ್ಲಿ ಊಳಿಗಮಾನ್ಯ ಪದ್ಧತಿ ರದ್ದಾದ ಅನಂತರ, ಕೈದಿಗಳನ್ನು ಹಡಗುಗಳಲ್ಲಿ ಹುಟ್ಟುಹಾಕುವ ಕೆಲಸಕ್ಕೆ ನೇಮಕ ಮಾಡಲಾಗುತ್ತಿತ್ತು.

ಆದರೆ ಉಗಿಚಾಲಿತ ನೌಕೆಗಳು ಅಸ್ತಿತ್ವಕ್ಕೆ ಬಂದ ಅನಂತರ ಕೈದಿಗಳು ಈ ರೀತಿಯ ಶ್ರಮದಾನದಿಂದ ಮುಕ್ತಿ ಪಡೆದರು. ಬದಲಿಗೆ 18ನೆಯ ಶತಮಾನದಲ್ಲಿ ಆರಂಭವಾದ ಲೋಕೋಪಯೋಗಿ ಕೆಲಸಗಳಾದ ರಸ್ತೆ ನಿರ್ಮಾಣ ಮುಂತಾದ ಕಾರ್ಯಗಳಿಗೆ ಇವರ ಶ್ರಮವನ್ನು ಬಳಸಿಕೊಳ್ಳಲಾಗುತ್ತಿತ್ತು. ಇಂದು ಸಹ ಅನೇಕ ರಾಷ್ಟ್ರಗಳಲ್ಲಿ ಈ ರೀತಿಯ ದುಡಿಮೆ ರೂಢಿಯಲ್ಲಿದೆ. ತನ್ನ ವಸಾಹತುಗಳಲ್ಲಿದ್ದ ಶ್ರಮದ ಕೊರತೆಯನ್ನು ನೀಗಲು ಹಾಗೂ ಸ್ವದೇಶದಲ್ಲಿದ್ದ ಕಾರಾಗೃಹಗಳ ಕೊರತೆಯ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಇಂಗ್ಲೆಂಡ್ ತನ್ನ ಕೈದಿಗಳನ್ನು ವಸಾಹತುಗಳಿಗೆ ಮುಖ್ಯವಾಗಿ ಅಮೆರಿಕಕ್ಕೆ ಸಾಗಿಸಿ ಅಲ್ಲಿ ಅವರಿಂದ ದುಡಿಸುತ್ತಿತ್ತು. ಅಮೆರಿಕ ಸಂಯುಕ್ತಸಂಸ್ಥಾನ ಸ್ವಾತಂತ್ರ್ಯವನ್ನು ಘೋಷಿಸಿಕೊಂಡ ಮೇಲೆ ಇಂಗ್ಲೆಂಡ್ ತನ್ನ ಕೈದಿಗಳನ್ನು ಆಸ್ಟ್ರೇಲಿಯಕ್ಕೆ ಸಾಗಿಸುತ್ತಿತ್ತು. ಆಸ್ಟ್ರೇಲಿಯದ ಕಾರ್ಮಿಕರು ಇಂಗ್ಲೆಂಡಿನ ಈ ವರ್ತನೆಯನ್ನು ತೀವ್ರವಾಗಿ ಪ್ರತಿಭಟಿಸಿದಾಗ ಅದು ಈ ಕ್ರಮವನ್ನು ಕೈಬಿಡಬೇಕಾಯಿತು. 

ಪಾಶ್ವಾತ್ಯ ರಾಷ್ಟ್ರಗಳಲ್ಲಿ ಕೈಗಾರಿಕಾಕ್ರಾಂತಿಯಿಂದ ಕಾರ್ಮಿಕರ ದುಡಿಮೆಯ ಸ್ವರೂಪವೇ ಬದಲಾದಾಗ ಕೈದಿಗಳ ದುಡಿಮೆಯಲ್ಲೂ ವ್ಯತ್ಯಾಸವಾಯಿತು. ಯೂರೋಪ್ ಮತ್ತು ಅಮೆರಿಕಗಳಲ್ಲಿ ಕೈದಿಗಳ ಶ್ರಮವನ್ನು ಗುತ್ತಿಗೆಗೆ ಪಡೆಯುವ ಪದ್ಧತಿ ಜಾರಿಗೆ ಬಂತು. ಬಂದಿಗಳ ಮೇಲೆ ದೈಹಿಕ ಹಕ್ಕನ್ನು ಸರ್ಕಾರವೇ ಉಳಿಸಿಕೊಂಡು ತಲೆಗೆ ಇಷ್ಟೆಂಬ ಲೆಕ್ಕದ ಮೇಲೆ ಅವರನ್ನು ಖಾಸಗಿ ಉತ್ಪಾದಕರಿಗೆ ಗುತ್ತಿಗೆಯಾಗಿ ಕೊಡಲಾಗುತ್ತಿತ್ತು. ಕೈದಿಗಳು ಖಾಸಗಿ ಉತ್ಪಾದಕರ ನಿರ್ದೇಶನದಂತೆ ಕಾರಾಗೃಹದ ಗೋಡೆಗಳ ಒಳಗೆ ದುಡಿದು ವಸ್ತುಗಳನ್ನು ಉತ್ಪಾದಿಸುತ್ತಿದ್ದರು. ಕೈದಿಗಳ ಈ ಬಗೆಯ ಶೋಷಣೆಯನ್ನು ಕಾರ್ಮಿಕ ಸಂಘಗಳು ತೀವ್ರವಾಗಿ ವಿರೋಧಿಸಿದುವು. ಇದರಿಂದಾಗಿ ಗುತ್ತಿಗೆ ಶ್ರಮ ಪದ್ಧತಿ ಬಹುತೇಕ ಅಂತ್ಯವಾಯಿತು. ಅಷ್ಟೇ ಅಲ್ಲದೆ, ಕಾರಾಗೃಹದಲ್ಲಿ ಕೈದಿಗಳು ನಡೆಸುವ ಉತ್ಪಾದನೆಯನ್ನು ಬಹಿರಂಗ ಪೇಟೆಯಲ್ಲಿ ಮಾರಾಟ ಮಾಡುವ ಕ್ರಮ ಸಹ ತಪ್ಪಿ, ಕೈದಿಗಳು ತಮಗೆ ಅಗತ್ಯವಿರುವ ವಸ್ತುಗಳನ್ನು ಮತ್ತು ಸರ್ಕಾರಿ ಸಂಸ್ಥೆಗಳಿಗೆ ಉಪಯೋಗವಿರುವ ವಸ್ತುಗಳನ್ನು ಮಾತ್ರ ಉತ್ಪಾದಿಸುವ ಕ್ರಮ ಜಾರಿಗೆ ಬಂತು. ಕೈದಿಗಳ ದುಡಿಮೆಯ ದುರುಪಯೋಗವೂ ಸಹಜವಾಗಿಯೇ ಅಂತ್ಯವಾಯಿತು. ಕೈದಿಗಳ ಮನೋವೃತ್ತಿ, ಕುಶಲತೆ ಇವುಗಳಿಗೆ ಅನುಗುಣವಾದ, ಅವರು ಬಿಡುಗಡೆ ಹೊಂದಿದ ಅನಂತರ ಜೀವನೋಪಾಯಕ್ಕೆ ಅನುಕೂಲವಾಗುವ ಕೆಲಸವನ್ನು ಅವರಿಂದ ಮಾಡಿಸುವ ಪದ್ಧತಿ ಆರಂಭವಾದ್ದು ಆಗ.

ಕೃಷಿಪ್ರಧಾನ ರಾಷ್ಟ್ರಗಳಲ್ಲಿ ಕೈದಿಗಳ ಶ್ರಮವನ್ನು ಬೇಸಾಯದ ಕಾರ್ಯಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ. ಸ್ಕಾಂಡಿನೇವಿಯನ್ ರಾಷ್ಟ್ರಗಳಲ್ಲೂ ಇಟಲಿಯಲ್ಲೂ ಉತ್ತಮ ಗುಣವುಳ್ಳ ಕೈದಿಗಳನ್ನು ಆಯ್ದು, ಅವರಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಿ, ಅವರನ್ನು ಕೃಷಿ ಉದ್ಯಮಕ್ಕೆ ಹಚ್ಚಲಾಗುತ್ತಿದೆ. ಕೈದಿಗಳಿಗಾಗಿ ವಿಶಿಷ್ಟವಾದ ಕಾರ್ಮಿಕ ಕಾನೂನುಗಳು ಸಹ ಈ ರಾಷ್ಟ್ರಗಳಲ್ಲಿ ಜಾರಿಗೆ ಬಂದಿವೆ. ಕಾರ್ಮಿಕರ ಶ್ರಮದ ವೇಳೆ, ಅವನಿಗೆ ದೊರೆಯಬಹುದಾದ ವೇತನ ಇವನ್ನು ನಿಗದಿ ಮಾಡಲಾಗಿದೆ.

ಸೋವಿಯತ್ ದೇಶ ಮತ್ತು ಇಟಲಿಯಲ್ಲಿ ಕಾರಾಗೃಹ ಶ್ರಮಿಕನಿಗೆ ವೇತನ ಪಡೆಯಲು ಕಾನೂನಿನ ಹಕ್ಕನ್ನು ದೊರಕಿಸಿಕೊಡಲಾಗಿದೆ. ಅನೇಕ ಐರೋಪ್ಯ ರಾಷ್ಟ್ರಗಳಲ್ಲಿ ಮತ್ತು ಅಮೆರಿಕ ಸಂಯುಕ್ತಸಂಸ್ಥಾನದ ಕೆಲವು ರಾಜ್ಯಗಳಲ್ಲಿ ಕಾರಾಗೃಹ ಕಾರ್ಮಿಕನಿಗೆ ಕಾರ್ಮಿಕ ಅಪಘಾತದ ವಿರುದ್ಧ ರಕ್ಷಣೆಯೂ ಉಂಟು. ದುಡಿಯುವುದು ಪ್ರತಿಯೊಬ್ಬನ ಹಕ್ಕು ಎಂಬ ನೀತಿಯನ್ನು ಕಾರಾಗೃಹದ ಕೈದಿಗಳಿಗೂ ಸೋವಿಯತ್ ದೇಶದಲ್ಲಿ ಅನ್ವಯಿಸಲಾಗಿದೆ. ಕೆಲವೊಂದು ವರ್ಗದ ಕೈದಿಗಳನ್ನು ಬಿಟ್ಟು, ಉಳಿದ ಎಲ್ಲರೂ ತಮ್ಮ ದುಡಿಮೆಗೆ ಪ್ರತಿಯಾಗಿ, ಹೊರಗಡೆ ಇರುವ ಕಾರ್ಮಿಕರಿಗೆ ನೀಡುವಷ್ಟೇ ವೇತನವನ್ನು ಪಡೆಯುವ ಅನುಕೂಲವುಂಟು. ಕೈದಿಗಳಿಗೆ ಕಾರ್ಮಿಕ ಸಂಘಗಳ ಸದಸ್ಯರಾಗುವ ಹಕ್ಕುಂಟು. ಇತರ ಕಾರ್ಮಿಕರಿಗಾಗಿ ನಡೆಸುವ ಉತ್ಪಾದನ ಸ್ಪರ್ಧೆಯನ್ನು ಕೈದಿಗಳಿಗೂ ನಡೆಸಿ ಅವರಲ್ಲಿ ಹೆಚ್ಚು ಉತ್ಪಾದಿಸುವವರನ್ನು ಪುರಸ್ಕರಿಸಲಾಗುತ್ತದೆ. ಸೋವಿಯತ್ ದೇಶದಲ್ಲಿ ತಯಾರಾಗುವ ಇಟ್ಟಿಗೆಯಲ್ಲಿ ಅರ್ಧದಷ್ಟು ಉತ್ಪಾದನೆಯಾಗುವುದು ಕೈದಿಗಳಿಂದ. ಭಾರತದಲ್ಲಿ ಸಹ ಕಾರಾಗೃಹ ದುಡಿಮೆಗೆ ಮಾನ್ಯತೆಯಿದೆ. ಇಲ್ಲಿಯ ಕೈದಿಗೆ ಅವನ ದುಡಿಮೆಗೆ ಪ್ರತಿಯಾಗಿ ವೇತನ ದೊರೆಯುತ್ತದೆ. ಭಾರತದ ಜೈಲುಗಳಲ್ಲಿ ಕೈಕಸಬುಗಳೇ ಅಧಿಕ. ಉತ್ಪಾದನೆಯಾದ ವಸ್ತುಗಳ ಹೆಚ್ಚು ಭಾಗವನ್ನು ಸರ್ಕಾರಿ ಇಲಾಖೆಗಳಿಗೆ ಒದಗಿಸಲಾಗುತ್ತದೆ. ಸಾರ್ವಜನಿಕರಿಗೂ ಅಲ್ಪ ಪ್ರಮಾಣದಲ್ಲಿ ಮಾರಾಟ ಮಾಡುವುದುಂಟು.

 

(ಸಿ.ಕೆ.ಆರ್.)